ವೀರಮ್ಮಾಜಿ
	ಕೆಳದಿ ಸಂಸ್ಥಾನವನ್ನು ಆಳಿದ ರಾಣಿ (1756-63). ಇಮ್ಮಡಿ ಬಸವಪ್ಪನಾಯಕನ ಹೆಂಡತಿ. ಬಸವಪ್ಪನಾಯಕನ ನಿಧನಾನಂತರ ಅವನ ದತ್ತುಮಗ ಚೆನ್ನಬಸವಪ್ಪನಾಯಕ ರಾಜನಾಗಿ ಕೇವಲ ಮೂರು ವರ್ಷಗಳಲ್ಲಿ ನಿಧನಹೊಂದಿದ. ಅವನ ತರುವಾಯ ವೀರಮ್ಮಾಜಿಯು ಸೋಮಶೇಖರನಾಯಕ ಎಂಬ ಬಾಲಕನನ್ನು ದತ್ತು ತೆಗೆದುಕೊಂಡು, ಸಿಂಹಾಸನದ ಮೇಲೆ ಕೂಡಿಸಿ, ತಾನೇ ಆಡಳಿತ ನಡೆಸಲಾರಂಭಿಸಿದಳು. ಆ ವೇಳೆಗೆ ಮರಾಠರು ಕೆಳದಿ ರಾಜ್ಯದ ಮೇಲೆ ದಂಡೆತ್ತಿ ಬಂದರು. ಅವರ ಪಿಡುಗನ್ನು ಐಶ್ವರ್ಯ ಪ್ರಲೋಭನದಿಂದ ನಿವಾರಿಸಲು ವೀರಮ್ಮಾಜಿ ಪ್ರಜೆಗಳ ಮೇಲೆ ಹೆಚ್ಚು ಕರಭಾರ ವಿಧಿಸಿದಳು. ಇದರಿಂದ ಪ್ರಜಾವರ್ಗ ಅಸಂತುಷ್ಟವಾಯಿತು. ಮಿಗಿಲಾಗಿ ತನ್ನ ದರ್ಪಿಷ್ಟ ನೀತಿಯಿಂದ ವೀರಮ್ಮಾಜಿ ರಾಜ್ಯದ ಹಿತಚಿಂತಕರಾಗಿದ್ದ ಸಚಿವ ವರ್ಗದವರನ್ನು ಸೆರೆಯಲ್ಲಿರಿಸಿ ಕೆಳದಿ ರಾಜ್ಯದ ವಿನಾಶಕ್ಕೆ ದಾರಿಮಾಡಿದಳು.

	ಈ ವೇಳೆಗೆ ಮೈಸೂರಿನ ರಾಜಕೀಯದಲ್ಲಿ ಹೈದರ್ ಪ್ರಾಬಲ್ಯಕ್ಕೆ ಬಂದಿದ್ದ. ಅಲ್ಲದೆ ಚಿತ್ರದುರ್ಗದ ಪಾಳೆಯಗಾರನೊಬ್ಬ ಕೆಳದಿಯ ರಾಜ ಚೆನ್ನಬಸವ ಸತ್ತಿಲ್ಲ; ಮೋಸದಿಂದ ಅವನನ್ನು ರಾಜ್ಯದಿಂದ ಓಡಿಸಲಾಗಿದೆ; ಅವನಿಗೇ ರಾಜ್ಯ ದಕ್ಕಬೇಕೆಂದು ಒಬ್ಬ ವ್ಯಕ್ತಿಯನ್ನು ಚೆನ್ನಬಸವನೆಂದು ಮುಂದುಮಾಡಿ ವಾದಿಸುತ್ತಿದ್ದ. ಆ ಕಲ್ಪಿತ ಚೆನ್ನಬಸವನಾಯಕನಿಗೆ ಸಹಾಯ ನೀಡುವ ನೆಪದಿಂದ 1762ರಲ್ಲಿ ಹೈದರ್ ಬಿದನೂರಿನ ಮೇಲೆ ದಂಡೆತ್ತಿಬಂದ. ರಾಣಿ ವೀರಮ್ಮಾಜಿ ಜನಪ್ರಿಯತೆಯನ್ನೂ ಅಧಿಕಾರವರ್ಗದವರ ಬೆಂಬಲವನ್ನೂ ಕಳೆದುಕೊಂಡಿ ದ್ದರಿಂದ ಹೈದರ್‍ನೊಡನೆ ಯುದ್ಧವನ್ನು ನಿವಾರಿಸಲು ಸಂಧಾನಕ್ಕೆ ಪ್ರಯತ್ನಪಟ್ಟಳು. ಆದರೆ ಅದು ಫಲಿಸದಿದ್ದುದರಿಂದ ಯುದ್ಧ ಅನಿವಾರ್ಯ ವಾಯಿತು. ರಾಣಿಯ ಸೈನ್ಯ ಸೋತುಹೋಯಿತು. ಬಿದನೂರಿನ ಅಪಾರ ಐಶ್ವರ್ಯವೂ ಕೆಳದಿಯ ರಾಜ್ಯವೂ ಹೈದರನ ವಶವಾದವು. ರಾಣಿ ವೀರಮ್ಮಾಜಿ ಮತ್ತು ಅವಳ ದತ್ತು ಪುತ್ರ ಸೋಮಶೇಖರನಾಯಕ ಹೈದರನ ಬಂದಿಗಳಾದರು. ಅವರನ್ನು ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಡಲಾಯಿತು (1763). ಸ್ವಲ್ಪ ಕಾಲಾನಂತರ ವೀರಮ್ಮಾಜಿ ನಿಧನಹೊಂದಿದಳು.						
			(ಜಿ.ಆರ್.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ